ಒಂದು ಚಾರಿತ್ರಿಕ ಸ್ಥಳ. ತುಮಕೂರು ನಗರಕ್ಕೆ ದಕ್ಷಿಣದಲ್ಲಿ 7ಕಿಮೀ ದೂರದಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿ ನಂದಿಪುರವೆಂಬ ಹೆಸರಿದೆ. ಇಲ್ಲಿ ಶೂನ್ಯಸಂಪಾದನೆ ಮತ್ತು ಅನಾದಿ ವೀರಶೈವಸಂಗ್ರಹವನ್ನು ಬರೆದ ಸಿದ್ಧವೀರಣಾಚಾರ್ಯ ಹಾಗೂ ಸಂಪಾದನೆ ಪರ್ವತೇಶ್ವರ, ವಿರಕ್ತ ತೋಂಟದಾರ್ಯ ಮೊದಲಾದ ಕವಿಗಳು ಆಗಿ ಹೋಗಿದ್ದಾರೆ. ಎಡೆಯೂರಿನ ಸಿದ್ಧಲಿಂಗೇಶ್ವರರು ಇಲ್ಲಿ ಕೆಲಕಾಲ ಇದ್ದರೆಂದು ಹೇಳಲಾಗುತ್ತದೆ.

ಪ್ರತಿವರ್ಷವೂ ಮಣ್ಣಿನಿಂದ ನಿರ್ಮಿಸಿ ಕೆರೆಯಲ್ಲಿ ವಿಸರ್ಜಿಸಲಾಗುವ ಬೃಹದ್ ಗಣಪತಿ ವಿಗ್ರಹದಿಂದಾಗಿ ಈ ಸ್ಥಳ ಈಗ ಪ್ರಸಿದ್ಧಿ ಪಡೆದಿದೆ. ಈ ಗಣಪತಿಯ ಹೆಸರಿನಲ್ಲಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಎತ್ತರದಲ್ಲಿ 2.5ಮೀ (8 ಅಡಿ) ಮೀರಿದ ಈ ಗಣಪತಿಯ ಸುಂದರ ವಿಗ್ರಹವನ್ನು ರಚಿಸಲು ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಗಣಪತಿ ಹಬ್ಬದ ದಿನದಿಂದಲೇ ಬೃಹದ್ ಗಣಪತಿಯ ರಚನೆ ಆರಂಭವಾಗುತ್ತದೆ. ವಿಗ್ರಹದ ಪೂರ್ಣ ರಚನೆಯಾದ ಮೇಲೆ ಒಂದು ತಿಂಗಳ ಕಾಲ ಸತತವಾಗಿ ಅದಕ್ಕೆ ಪುಜಾವಿಶೇಷಗಳು ನಡೆಯುತ್ತವೆ. ಈ ಸಮಯದಲ್ಲಿ ಭಕ್ತಾದಿಗಳು ದೂರದಿಂದ ಬಂದು ದರ್ಶನ ಪಡೆದು ಹೋಗುತ್ತಾರೆ.

ಈ ಊರಿನ ಪಶ್ಚಿಮಕ್ಕೆ 1 ಕಿಮೀ ದೂರದಲ್ಲಿ ಪ್ರಸಿದ್ಧ ಕೈದಾಳ ಕ್ಷೇತ್ರವಿದೆ. 

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಇದೇ ಹೆಸರಿನ ಒಂದು ಊರಿದೆ. ಇಲ್ಲಿ ಪ್ರಸಿದ್ಧವಾದ ವೀರಶೈವ ಮಠವೊಂದಿದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ